ಪರ್ಯಾಯ ಚಲನೆಯ ರೇಚಕ -
ಧನಾತ್ಮಕ ವಿಸ್ಥಾಪನ ಪಂಪುಗಳ (ರೆಸಿಪ್ರೊ ಕೆಟಿಂಗ್ ಪಂಪ್ಸ್) ಜಾತಿಗೆ ಸೇರಿದ ರೇಚಕ. ಅಂದರೆ ಚಲಿಸುವ ಅಂಶದ ಸಹಾಯದಿಂದ ದ್ರವ ವಿಸ್ಥಾಪನೆಗೊಳ್ಳುವುದರಿಂದ ರೇಚಕದಲ್ಲಿ ಉತ್ತಾಪಕ (ಲಿಫ್ಟ್) ಮತ್ತು ಒತ್ತಡ ಉತ್ಪನ್ನವಾಗುತ್ತವೆ. ಮೂಲಚಾಲಕದಿಂದ (ಪ್ರೈಮ್ ಮೂವರ್) ಉತ್ಪನ್ನವಾದ ಯಾಂತ್ರಿಕ ಚಲನೆಯಿಂದ ದ್ರವವನ್ನು ಎಳೆಯುವುದರಿಂದಲೂ ಬಲವಂತದಿಂದ ತಳ್ಳುವುದರಿಂದಲೂ ರೇಚಕದ ಸಿಲಿಂಡರಿನಲ್ಲಿ ದ್ರವ ಅನುಕ್ರಮವಾಗಿ ತುಂಬುತ್ತದೆ ಮತ್ತು ಬರಿದಾಗುತ್ತದೆ. ರೇಚಕದಿಂದ ಹೊರಬರುವ ದ್ರವದ ಘನಗಾತ್ರ ಒತ್ತಡಕ್ಕೆ ಏರಿಳಿತಗಳಿಂದ ವ್ಯತ್ಯಾಸವಾಗುವುದಿಲ್ಲ. ಆದರೆ ರೇಚಕದ ವೇಗಕ್ಕೆ ಅನುಗುಣವಾಗಿರುತ್ತದೆ.

ಚಿತ್ರ-1

ಅಲ್ಪವೇಗದವುಗಳಾದ ಈ ಪರ್ಯಾಯ ಚಲನೆಯ ರೇಚಕಗಳಿಗೆ ಪಟ್ಟಿಚಾಲಿತ ವಿದ್ಯುತ್ ಮೋಟಾರುಗಳೇ ಮೂಲ ಚಾಲಕಗಳು, ನಿರ್ಮಾಣ ವೈಶಿಷ್ಟ್ಯಗಳ ಪ್ರಕಾರ, ಪರ್ಯಾಯ ಚಲನೆಯ ರೇಚಕಗಳನ್ನು ಈ ರೀತಿ ವಿಂಗಡಿಸಬಹುದು :

ಚಿತ್ರ-2-1

ಚಿತ್ರ-2-2

ಚಿತ್ರ-3

ಇಲ್ಲಿಯ ಚಿತ್ರಗಳಲ್ಲಿ ತೋರಿಸಿರುವಂತೆ ಸಿಲಿಂಡರಿನಲ್ಲಿ ಪರ್ಯಾಯ ಚಲನೆಯನ್ನು ಕೊಂತ ಪರ್ಯಾಯ ಚಲನೆಯ ರೇಚಕಗಳಲ್ಲಿ ಕೊಂತವೂ ಪ್ಲಂಜರ್ ಪರ್ಯಾಯ ಚಲನೆಯ ರೇಚಕಗಳಲ್ಲಿ ಪ್ಲಂಜರೂ ಮಾಡುತ್ತವೆ.
ಕೊಂತ ಮತ್ತು ಪ್ಲಂಜರಿನ ಪರ್ಯಾಯ ಚಲನೆಯ ರೇಚಕಗಳ ಕಾರ್ಯವಿಧಾನ ಕೊಂತ ಅಥವಾ ಪ್ಲಂಜರಿನ ಚಲನೆಯಿಂದ ಸಿಲಿಂಡರಿನಲ್ಲಿ ನಿರ್ವಾತ ಉತ್ಪನ್ನವಾಗುತ್ತದೆ. ಆಗ ವಾತಾವರಣದ ಒತ್ತಡ ನೀರ್ಕುಳಿಯಲ್ಲಿರುವ ನೀರನ್ನು ಚೂಷಣ ಕೊಳವೆಯ (ಸಕ್ಷನ್ ಪೈಪ್) ಮೂಲಕ ಸಿಲಿಂಡರಿನೊಳಕ್ಕೆ ತಳ್ಳುತ್ತದೆ. ಹೀಗೆ ಬಂದ ನೀರನ್ನು ಕೊಂತ ಅಥವಾ ಪ್ಲಂಜರ್ ಪ್ರಧಾನ (ಡೆಲಿವರಿ) ಕೊಳವೆಯ ಮೂಲಕ ಬಲವಂತದಿಂದ ಮೇಲಕ್ಕೆ ತಳ್ಳುತ್ತದೆ. ಮೊತ್ತಮೊದಲು ಚೂಷಣಕೊಳವೆ ಮತ್ತು ಸಿಲಿಂಡರಿನ ಆಯತನ ಗಾತ್ರಗಳಲ್ಲಿಯ (ಕ್ಲಿಯರೆನ್ಸ್ ವಾಲ್ಯೂಮ್) ವಾಯುವನ್ನು ಹೊರದೂಡಲು ಅವನ್ನು ನೀರಿನಿಂದ ತುಂಬಲಾಗುತ್ತದೆ. ಇದಕ್ಕೆ ರೇಚಕದ ಪ್ರೈಮಿಂಗ್ ಎಂದು ಹೆಸರು. ಕೊಂತ ಅಥವಾ ಪ್ಲಂಜರ್ ಸಿಲಿಂಡರಿನಲ್ಲಿ ಮುಂದಕ್ಕೆ ಚಲಿಸಿದಾಗ ನಿರ್ವಾತ ಏರ್ಪಡುತ್ತದೆ. ಆಗ ಚೂಷಣ ಕವಾಟ (ಸಕ್ಷನ್ ವಾಲ್ವ್) ತೆರೆಯುತ್ತದೆ. ನೀರಿನ ಸ್ತಂಭ ಸಂಸಂಜನ ಬಲಗಳಿಂದ (ಫೋರ್ಸಸ್ ಆಫ್ ಕೊಹಿಶನ್) ಚೂಷಣ ಕೊಳವೆಯ ಮೂಲಕ ನೀರ್ಕುಳಿಯಿಂದ ಮೇಲಕ್ಕೆ ಏಳುತ್ತದೆ. ಈ ನೀರು ವಾತಾವರಣದ ಒತ್ತಡದಿಂದ ಉಂಟಾದ ಆಸಂಜನ ಬಲಗಳಿಂದ (ಫೋರ್ಸಸ್ ಆಫ್ ಅಡ್ಹಿಶನ್) ಕೊಂತ ಅಥವಾ ಪ್ಲಂಜರ್ ಒಡನೆ ಚಲಿಸುತ್ತದೆ. ಕೊಂತ ಅಥವಾ ಪ್ಲಂಜರ್ ಸಿಲಿಂಡಿರಿನಲ್ಲಿ ಹಿಂದಕ್ಕೆ ಚಲಿಸಿದಾಗ ನೀರಿನ ಒತ್ತಡಕ್ಕೆ ಚೂಷಣ ಕವಾಟ ಮುಚ್ಚಿಕೊಳ್ಳುತ್ತದೆ, ಮತ್ತು ಪ್ರದಾನ ಕವಾಟ ತೆರೆಯುತ್ತದೆ. ಆಗ ನೀರು ಪ್ರಧಾನ ಕೊಳವೆಯ ಮೂಲಕ ಹೊರಕ್ಕೆ ಬರುತ್ತದೆ. ಚೂಷಣ ಶೀರ್ಷ ಮತ್ತು ಪ್ರದಾನಶೀರ್ಷ ಸೇರಿದ್ದರೆ ಅದಕ್ಕೆ ಸ್ಥೈತಿಕ ಶೀರ್ಷವೆಂದು (ಸ್ಟ್ಯಾಟಿಕ್ ಹೆಡ್) ಹೆಸರು.

ಏಕಲ ಮತ್ತು ಉಭಯ ಕ್ರಿಯೆ ಪರ್ಯಾಯ ಚಲನೆಯ ರೇಚಕಗಳಿಗಿರುವ ವ್ಯತ್ಯಾಸ :
ಕೊಂತ ಅಥವಾ ಪ್ಲಂಜರ್ ಪರ್ಯಾಯ ಚಲನೆಯ ರೇಚಕಗಳು
					  
ಏಕಲ ಕ್ರಿಯೆ		
				ಉಭಯಕ್ರಿಯೆ
ಉಪಯೋಗಗಳು : ಸಾಮಾನ್ಯವಾಗಿ ಅಲ್ಪನಿಸ್ಸರಣ ಮತ್ತು ಎತ್ತರದ ಶೀರ್ಷಗಳಿಗೆ ಪರ್ಯಾಯ ಚಲನೆಯ ರೇಚಕಗಳು ಅತ್ಯಂತ ಯೋಗ್ಯವಾದವು ಅವನ್ನು ವಾಯು ಒತ್ತಡದ ವ್ಯವಸ್ಥೆಗೆಳಲ್ಲಿಯೂ ನೀರು ಮತ್ತು ಹಗುರ ಏಣಿ ಎತ್ತಲು ಬಾಯ್ಲರ್ ಸಂಘನಿತ್ರದಲ್ಲಿಯೂ ಉಪಯೋಗಿಸುತ್ತಾರೆ. ಬಹಳ ಹೆಚ್ಚು ಒತ್ತಡವನ್ನು ನಿರ್ಮಿಸುವುದೇ ಪ್ಲಂಜರ್ ರೇಚಕದ ವೈಶಿಷ್ಟ್ಯ. ಆದ್ದರಿಂದ ಸಾಮಾನ್ಯವಾಗಿ ಮರಳು ಮಿಶ್ರಿತ ನೀರನ್ನೆತ್ತಲು ಅದನ್ನು ಉಪಯೋಗಿಸುತ್ತಾರೆ.

ಬಕೆಟ್ ಅಥವಾ ಕೈರೇಚಕ : ಚಿತ್ರ 4ರಲ್ಲಿ ಕಾಣುವಂತೆ ಇದು ಊಧ್ರ್ವಮುಖ ಕೊಂತ ರೇಚಕ. ಕೊಂತದಲ್ಲಿರುವ ಕವಾಟ ಬಕೆಟ್ಟಿನ ಆಕಾರವಾಗಿರುತ್ತದೆ ಎಂದೇ ಬಕೆಟ್ ರೇಚಕ ಎಂಬ ಹೆಸರು. ರೇಚಕವನ್ನು ಕೈಯಿಂದ ಕೆಲಸಮಾಡಿದರೆ ಅದನ್ನು ಕೈರೇಚಕವೆಂದು ಕರೆಯುತ್ತಾರೆ. ಬಕೆಟ್ ಕವಾಟದೊಡನೆ ಕೊಂತ ಮೇಲಕ್ಕೆ ಏರುವಾಗ, ಬಕೆಟ್‍ಕವಾಟ ಮುಚ್ಚಿಕೊಳ್ಳುತ್ತದೆ. ಆಗ ಚೂಷಣ ಮತ್ತು ಪ್ರದಾನಘಾತ ಕೊಂತದ ಪರಿಣಾಮವಾಗಿ ಕೆಳಗಡೆಯ ಜಾಗಕ್ಕೆ ನೀರುತುಂಬಿಕೊಳ್ಳುತ್ತದೆ ಮತ್ತು ಅದೇವೇಳೆ ಕೊಂತದ ಮೇಲುಗಡೆಯಿದ್ದ ನೀರನ್ನು ಪ್ರಧಾನಕೊಳವೆಯ ಮೂಲಕ ಹೊರಕ್ಕೆ ತಳ್ಳಲಾಗುತ್ತದೆ. ಕೊಂತ ಕೆಳಕ್ಕೆ ತಳ್ಳಲಾಗುತ್ತದೆ. ಕೊಂತ ಕೆಳಕ್ಕೆ ಇಳಿಯುವಾಗ ಚೂಷಣ ಅಥವಾ ಪ್ರದಾನ ಘಾತ ಇರುವುದಿಲ್ಲ. ಆದರೆ ಕೊಂತ ಕವಾಟ ತೆರೆದು ಸಿಲಿಂಡರಿನ ಚೂಷಣ ವಿಭಾಗದಲ್ಲಿದ್ದ ನೀರು ಸಿಲಿಂಡರಿನ ಪ್ರದಾನ ವಿಭಾಗದ ಕಡೆಗೆ ಹರಿಯುತ್ತದೆ. ರೇಚಕದ ಅವಿಚ್ಛಿನ್ನ ಕಾರ್ಯಕ್ಕೆ ಈ ಚಕ್ರವನ್ನು ಅನುಕರಣಮಾಡಬೇಕು.

ಪರ್ಯಾಯ ಚಲನೆಯ ರೇಚಕಗಳಲ್ಲಿ ವಾಯಭಾಂಡಗಳು : ವಾಯುಭಾಂಡಗಳು (ಏರ್‍ವೆಸಲ್ಸ್) ಸಂವೃತ ಕೋಷ್ಠಗಳು. ಒತ್ತಡದ ಏರಿಳಿತವನ್ನು ಕಡಿಮೆ ಮಾಡಲು ಮತ್ತು ನೀರಿನ ಬೇರ್ಪಡೆಯ ಸಾಧ್ಯತೆಯನ್ನು ನಿವಾರಿಸಲು ಸಿಲಿಂಡರಿನ ಕಡೆ ಅಥವಾ ಪ್ರದಾನದ ಕಡೆ ಅಥವಾ ಎರಡೂ ಕಡೆ ವಾಯುಭಾಂಡಗಳನ್ನು ಇಡಬೇಕಾಗುತ್ತದೆ.

ಕಾರ್ಯವಿಧಾನ : ಪರ್ಯಾಯ ಚಲನೆಯ ರೇಚಕಗಳಲ್ಲಿ ವಾಯುಭಾಂಡ ಎಂಜಿನ್ನಿನ ಗತಿನಿಯಂತ್ರಕ ಚಕ್ರದಂತೆ (ಫ್ಲೈವೀಲ್) ವರ್ತಿಸುತ್ತದೆ. ಚಿತ್ರದಲ್ಲಿ ಕಾಣುವಂತೆ ಭಾಂಡದ ಮೇಲುಭಾಗ ಸಂಮರ್ದಿತ ವಾಯುವಿನಿಂದ ಕೂಡಿರುತ್ತದೆ ಈ ವಾಯು ನೀರಿನ ಒತ್ತಡದ ಏರಿಳಿತಗಳನ್ನು ಅವಶೋಷಿಸಲು ಸಂಕೋಚಿಸುತ್ತದೆ ಅಥವಾ ವ್ಯಕೋಚಿಸುತ್ತದೆ.

ಚಿತ್ರ-4

ನೀರಿನ ಒತ್ತಡ ಏರಿದಂತೆ, ಸರಾಸರಿ ನಿಸ್ಸರಣಕ್ಕಿಂತ ಹೆಚ್ಚಾದ ನೀರು ವಾಯುಭಾಂಡದೊಳಕ್ಕೆ ಬಲವಂತದಿಂದ ನುಗ್ಗುತ್ತದೆ. ಆಗ ಭಾಂಡದ ಮೇಲುಭಾಗದ ವಾಯು ಸಂಮರ್ದಿತ ಸ್ಥಿತಿಯಲ್ಲಿರುತ್ತದೆ. ಕೊಳವೆಯಲ್ಲಿ ನೀರಿನ ಒತ್ತಡ ಕಡಿಮೆ ಆದಾಗ ಸಂಮರ್ದಿತ ಸ್ಥಿತಿಯಲ್ಲಿದ್ದ ವಾಯು ಹೆಚ್ಚಾಗಿದ್ದು ನೀರನ್ನು ಹೊರಕ್ಕೆ ತಳ್ಳುತ್ತದೆ. ಹೀಗೆ ವಾಯಭಾಂಡ ಮಧ್ಯಕಾಲಿಕ ಜಲಾಶಯದಂತೆ ವರ್ತಿಸುತ್ತದೆ. ಚೂಷಣದ ಕಡೆ ನೀರು ಮೊದಲು ವಾಯು ಭಾಂಡದಲ್ಲಿ ಶೇಖರವಾಗಿ ಅನಂತರ ರೇಚಕದ ಸಿಲಿಂಡರಿನ ಕಡೆ ಹರಿಯುತ್ತದೆ. ಪ್ರಧಾನದ ಕಡೆಯೂ ನೀರು ಮೊದಲು ವಾಯುಭಾಂಡಕ್ಕೆ ಹೋಗಿ ಅಲ್ಲಿಂದ ಏಕರೀತಿಯ ವೇಗದಲ್ಲಿ ಹೊರ ಹೊಮ್ಮುತ್ತದೆ. ಆದ್ದರಿಂದ ಒತ್ತಡದ ಏರಿಳಿತಕ್ಕೆ ಒಳಗಾದ ನೀರಿನ ಸ್ತಂಭ ರೇಚಕದ ಸಿಲಿಂಡರಿನಿಂದ ವಾಯುಭಾಂಡದ ವರೆಗೆ ಮಾತ್ರ ಇರುವುದಾಗಿದೆ. ವಾಯುಭಾಂಡಗಳನ್ನು ರೇಚಕದ ಸಿಲಿಂಡರಿಗೆ ಆದಷ್ಟು ಹತ್ತಿರದಲ್ಲಿ ಜೋಡಿಸುವುದರಿಂದ ಒತ್ತಡ ಏರಿಳಿತಕ್ಕೆ ಒಳಗಾಗುವ ನೀರಿನ ಸ್ತಂಭ ಅತ್ಯಲ್ಪ. ಆದ್ದರಿಂದ ನೀರು ಒತ್ತಡದ ಏರಿಳಿತಕ್ಕೆ ಒಳಗಾಗದೆ ಏಕರೀತಿಯ ವೇಗದಲ್ಲಿ ಹರಿಯುತ್ತದೆ. 

ಚಿತ್ರ-5

ವಾಯುಭಾಂಡಗಳ ಕ್ರಿಯೆ. 1 ಚೂಷಣ ಕಡೆ : (ಚಿ)ನೀರಿನ ಬೇರ್ಪಡೆಯ ಸಾಧ್ಯತೆಯನ್ನು ಕಡಿಮೆಮಾಡುತ್ತದೆ; ಚೂಷಣ ಕೊಳವೆಯಲ್ಲಿ ವಾಯುಭಾಂಡವನ್ನು ಜೋಡಿಸುವುದರಿಂದ ವೇಗದ ಏರಿಳಿತವನ್ನು ಒಳಗೊಂಡ ಚೂಷಣ ಕೊಳವೆಯ ಉದ್ದವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ ನೀರಿನ ಬೇರ್ಪಡಿಕೆಯ ಸಾಧ್ಯತೆ ಅತಿಕಡಿಮೆ ಆಗುವುದು.
(b) ರೇಚಕ ಹೆಚ್ಚು ವೇಗದಲ್ಲಿ ಓಡುವಂತೆ ಮಾಡಲು ಸಾಧ್ಯ. ವಾಯುಭಾಂಡವನ್ನು ಆದಷ್ಟು ರೇಚಕದ ಸಿಲಿಂಡರಿನ ಹತ್ತಿರಕ್ಕೆ ಜೋಡಿಸಬೇಕು. ಆಗ ಒತ್ತಡದ ಏರಿಳಿತಗಳನ್ನು ಒಳಗೊಂಡ ನೀರಿನ ಸ್ತಂಭದ ಉದ್ದ ಆದಷ್ಟು ಕಡಿಮೆ ಆಗುವುದರಿಂದ ರೇಚಕ ಹೆಚ್ಚು ವೇಗದಲ್ಲಿ ಓಡಲು ಸಾಧ್ಯವಾಗುತ್ತದೆ ಮತ್ತು ನೀರಿನ ಬೇರ್ಪಡೆಯ ಭಯ ಇರದು.

ಚಿತ್ರ-6

(ಛಿ) ವಾಯುಭಾಂಡದ ಕೆಳಗಿರುವ ಚೂಷಣಕೊಳವೆಯ ಉದ್ದವನ್ನು ಹೆಚ್ಚಿಸಬಹುದು. ನೀರ್ಕುಳಿಯಿಂದ ಬಹಳ ದೂರದಲ್ಲಿ ರೇಚಕವನ್ನು ಇಡುವ ಅವಶ್ಯಕತೆ ಇದ್ದಾಗ ವಾಯುಭಾಂಡವನ್ನು ರೇಚಕದ ಸಿಲಿಂಡರಿನ ಹತ್ತಿರದಲ್ಲಿ ಜೋಡಿಸುವುದರಿಂದ ಚೂಷಣ ಕೊಳವೆಯ ಉದ್ದವನ್ನು ಹೆಚ್ಚಿಸಿಕೊಳ್ಳಬಹುದು.

(2) ಪ್ರಧಾನಕಡೆ : (a) ವೇಗೋತ್ಕರ್ಷಕ ಶೀರ್ಷ: ಉತ್ಪನ್ನಕ್ಕೆ ಬೇಕಾಗುವ ಹೆಚ್ಚು ವಿದ್ಯುತ್ತನ್ನು ಉಳಿಸಬಹುದು. ಸಾಮಾನ್ಯವಾಗಿ ಪ್ರಧಾನ ಕಡೆಯ ಕೊಳವೆ ಉದ್ದವಾಗಿರುತ್ತದೆ. ಆದ್ದರಿಂದ ವಾಯುಭಾಂಡವಿಲ್ಲದಿರುವಾಗ ವೇಗೋತ್ಕರ್ಷಕ ಶೀರ್ಷಉತ್ಪನ್ನ ಸಾಕಷ್ಟಿರುತ್ತದೆ. ಪ್ರಧಾನ ಕಡೆ ವಾಯುಭಾಂಡವನ್ನು ಜೋಡಿಸುವುದರಿಂದ ಏರಿಳಿತ ಒಳಗೊಂಡ ನೀರಿನ ಸ್ತಂಭದ ಉದ್ದ ಕಡಿಮೆ ಆಗುತ್ತದೆ. ಆಗ ವೇಗೋತ್ಕರ್ಷಶೀರ್ಷ ಉತ್ಪನ್ನಮಾಡಲು ಬೇಕಾದ ವಿದ್ಯುತ್ತು ಉಳಿಯುತ್ತದೆ.

(b) ಏಕರೀತಿಯ ನಿರ್ಧರಿತ ನಿಸ್ಸರಣಕ್ಕೆ ಭರವಸೆ ಆಗುತ್ತದೆ. ವಾಯುಭಾಂಡ ಇಲ್ಲದಿದ್ದರೆ ನಿರ್ಧರಿತ ನಿಸ್ಸರಣಕ್ಕೆ ಏರಿಳಿತಗಳಿಂದ ಕೂಡಿರುತ್ತದೆ. ವಾಯಭಾಂಡವನ್ನು ಜೋಡಿಸುವುದರಿಂದ ನಿರ್ಧರಿತ ನಿಸ್ಸರಣ ಏಕರೀತಿಯಲ್ಲಿರುತ್ತದೆ.
ಅಪಕೇಂದ್ರಕ ರೇಚಕಗಳಲ್ಲಿ ಇಲ್ಲದ ಆದರೆ ಈ ರೇಚಕಗಳಲ್ಲಿ ಇರುವ ಅನುಕೂಲತೆಗಳು : ಪರ್ಯಾಯ ಚಲನೆಯ ರೇಚಕಗಳು 700ಕೆಜಿ/(ಸೆಂಮೀ)-2 ವರೆಗೆ ಅಥವಾ ಇನ್ನೂ ಹೆಚ್ಚು ಒತ್ತಡವನ್ನು ಉತ್ಪನ್ನಮಾಡಬಲ್ಲವು, ಎತ್ತರದ ಶೀರ್ಷದಲ್ಲಿ ಅಲ್ಪನಿಸ್ಸರಣ ಸಾಧನೆಯನ್ನು ಈ ರೇಚಕಗಳು ಅಪಕೇಂದ್ರಕ ರೇಚಕಗಳಿಗಿಂತ ಹೆಚ್ಚು ದಕ್ಷ. ಈ ದಕ್ಷತೆ ಸುಮಾರು 90% ವರೆಗಿರುತ್ತದೆ.
(ಎಂ.ಪಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ